ಗ್ರಂಥ್ ಸಾಹೇಬ್ -
	ಸಿಕ್ಖರ ಪೂಜ್ಯ ಮತ ಗ್ರಂಥ : ಗ್ರಂಥರಾಜ ಎಂದು ಇದರ ಅರ್ಥ. ಸಿಖ್ ಮತ ಪ್ರತಿಷ್ಠಾಪಕ ಗುರು ನಾನಕ್ ಒಪ್ಪಿಕೊಂಡ ಮತ್ತು ರಚಿಸಿದ ಭಕ್ತಿಗೀತಗಳನ್ನೂ ಅವನ ಅನಂತರ ಬಂದ ಅಂಗದ ದೇವ, ಅಮರದಾಸ ರಾಮದಾಸ, ಅರ್ಜನ, ತೇಗಬಹದ್ದೂರ್ ಗುರುಗಳು ರಚಿಸಿದ ಗೀತಗಳು ಮತ್ತು ಶ್ಲೋಕಗಳನ್ನೂ ಹತ್ತನೆಯ ಗುರುವಾದ ಗುರು ಗೋಬಿಂದಸಿಂಹ ರಚಿಸಿದ ಒಂದು ದ್ವಿಪದಿಯನ್ನೂ ಗುರುಗಳ ಶುಶ್ರೂಷೆಯಲ್ಲಿ ತೊಡಗಿದ್ದು ಅವರನ್ನು ಮೆಚ್ಚಿ ಶಿಷ್ಯರು ಬರೆದ ಸ್ತೋತ್ರಗಳನ್ನೂ ಈ ಗ್ರಂಥ ಒಳಗೊಂಡಿದೆ. ಗುರುಗಳ ಗೀತಗಳನ್ನು ಅವರವರ ಹೆಸರಿನ ಕೆಳಗೆ ಒಂದು ಕಡೆ ಸೇರಿಸಿಲ್ಲ. ಗೀತಗಳು ಮೂವತ್ತೊಂದು ರಾಗಗಳಲ್ಲಿ ಇವೆ ; ಅವನ್ನು ರಾಗಗಳ ಪ್ರಕಾರ ವಿಭಾಗ ಮಾಡಿದೆ. ಗ್ರಂಥದಲ್ಲಿ ನಾನಕ್ ಗುರುವಿನವು 974, ಅಂಗದದೇವನವು 62, ಅಮರದಾಸನವು 907, ರಾಮದಾಸನವು 679, ಅರ್ಜನದೇವನವು 2218, ಗುರು ತೇಗಬಹದ್ದೂರನವು 115 ಗೀತಗಳಿವೆ. ಅಲ್ಲದೆ ಪೂರ್ವದ ಭಕ್ತರಲ್ಲಿ ಕಬೀರನ ಹಾಡು 541, ಷೇಕ್ ಫರೀದ್ ಎಂಬ ಮುಸ್ಲಿಂ ಸಂತನವು 138, ಭಕ್ತ ರವಿದಾಸನವು 41, ರಾಮಾನಂದನದು 1, ಪರಮಾನಂದನದು 1, ಸಾಧನ, ಪೀಪ, ಸೇನ, ಭಿಕನ, ಜಯದೇವ, ಬೇಲಿ - ಇವರವು ಒಂದೆರಡು, ಧನ್ನ, ತ್ರಿಲೋಚನ ಇವರವು ನಾಲ್ಕು ನಾಲ್ಕು ನಾಮದೇವನವು ಕೆಲವು ಸೇರಿವೆ. ಮತ್ತು ನಾನಕ್ ಗುರುವಿಗೆ ಭಜನೆಯಲ್ಲಿ ಕಿನ್ನರಿ ಬಾರಿಸಿದ ಮರ್ದನ ರಚಿಸಿದವು 3, ಗುರು ಅಂಗದದೇವ ಕೀರ್ತನೆಗಳಲ್ಲಿ ನೇಮಿಸಿಕೊಳ್ಳುತ್ತಿದ್ದ ಪಟ್ಟ, ಬಲವಂದ ಗಾಯಕ ವೃತ್ತಿಯ ಜೊತೆಗಾರರವು 8, ಗುರು ಅಮರದಾಸನ ಮರಿಮಗ ಸುಂದರನದು 1, ಸೂರದಾಸನ ಮರಿಮಗ ಪುರಂದರನದು 1, ಸೂರದಾಸನವು 2, ವರದಿ ಕಲಷಾ ಮತ್ತು ಅವನ ಜೊತೆಯ ಇನ್ನು ಹತ್ತುಮಂದಿ ಗಾಯಕರ 122, ಜಲಾಪ್ ಭಿಕ್ಕ, ಪಾಲ್ಹ, ಭಾಲ, ನಲ್ಹ, ಜ್ಞಾನಿ, ಬಲ, ಮಧುರ ಕಿರಾತ, ಹರವಂಶ ಎಂಬವರವು ಕೆಲವು ಇವೆ.

	ಗೀತಗಳನ್ನು ಪೇರಿಸಿರುವ ಶೀರ್ಷಿಕೆಯ ರಾಗಗಳು ಇವು ; ಶ್ರೀರಾಗ, ಮಜ್ಝ್ ಗೌರೀ, ಅಸಾ, ಗೂಜರಿ, ದೇವಗಾಂಧಾರಿ, ಬಿಹಾಗರ, ವಂಧಸ್, ಸೋರತ್, ಧನಸರಿ, ಜಯತ್‍ಸರಿ, ತೋಡಿ, ಬೈರಾಗಿ, ತಿಲಾಂಗ್, ಸೂಹಿ, ಬಿಲಾವರ್, ಗೌಂಡ್, ರಾಮಕಲಿ, ನಟ್, ಮಾಳಿಗೌರ, ಮರು, ತುಖಾರಿ, ಕೇದಾರ, ಭೈರೋ, ಬಸಂತ್, ಸಾರಂಗ್, ಮಲಾರ್, ಕಾನ್ರ, ಕಲ್ಯಾಣ್, ಪ್ರಭಾತಿ, ಜೈಜಾವಂತಿ.

	ಮೊದಲಲ್ಲಿ ಗುರುಗಳ ಗೀತಗಳು ಆಮೇಲೆ ಭಕ್ತರ ಗೀತಗಳು ಬರುತ್ತವೆ. ಈ ಗೀತಗಳ ಭಾಷೆ ಪ್ರಾಚೀನ ಪಂಜಾಬೀ. ಇವುಗಳ ಪದಗಳು, ಪದಪ್ರಯೋಗ, ಅವುಗಳ ರಚನೆಯ ದೇಶಕಾಲದಲ್ಲಿ ಬಳಕೆಯಲ್ಲಿದ್ದವು. ಇವುಗಳ ವ್ಯಾಕರಣ ಬಳಕೆಯ ಭಾಷೆಯದು, ಗ್ರಂಥಸ್ಥ ಭಾಷೆಯದಲ್ಲ. ಹೀಗಾಗಿ ಅನೇಕ ವೇಳೆ ಮಾತುಗಳ ಅರ್ಥ ಏನು ಎಂದು ತಿಳಿಯಲು ಸಂಪ್ರದಾಯದ ಸಹಾಯ ತೀರ ಅವಶ್ಯವಾಗುತ್ತದೆ. ಸಂಪ್ರದಾಯದಂತೆ ಅರ್ಥ ಇದು ಎಂದು ಹೇಳುವ ಜನರನ್ನು ಸಿಕ್ಖ್ ಸಮಾಜ ಜ್ಞಾನಿ ಎಂದು ಕರೆಯುತ್ತಾರೆ. ಸಿಕ್ಖ್ ಮತದಲ್ಲಿ ಗುರು ನಾನಕ್ ಮೊದಲಾಗಿ ಗುರುಗೋಬಿಂದಸಿಂಹ ವರೆಗಿನ ಹತ್ತು ಜನ ಗುರುಗಳು ಒಂದೇ ಗುರುವ್ಯಕ್ತಿ ಎಂಬ ಭಾವನೆ ಇದೆ. ಆದಿ ಗುರುವಿನ ತೇಜಸ್ಸು ಅವನಿಂದ ಎರಡನೆಯ ಗುರುವಿಗೆ, ಆತನಿಂದ ಮೂರನೆಯವನಿಗೆ, ಹಾಗೆಯೇ ಒಂಭತ್ತನೆಯ ಗುರುವಿನಿಂದ ಹತ್ತನೆಯವನಿಗೆ ಬಂದಿತೆನ್ನುವುದು ಇವರ ನಂಬಿಕೆ. ಹತ್ತನೆಯ ಗುರುಗೋಬಿಂದಸಿಂಹ ತನ್ನ ಅನಂತರ ಗುರುಗಳಿಲ್ಲ ಎಂದು ಹೇಳಿ, ಇನ್ನು ಮುಂದೆ ಶಿಷ್ಯರಿಗೆ ಗ್ರಂಥ್ ಸಾಹೇಬ್ ಗುರು ಎಂದು ನಿಯಮಿಸಿ. ಹೀಗೆ ಈ ಗ್ರಂಥ ಸಿಕ್ಖ್ ಜನರಿಗೆ ಗುರುಪರಂಪರೆಯ ಮೂರ್ತಿಯಾಗಿ ನಿಂತಿದೆ. ಇದನ್ನು ಯಾವಾಗಲೂ ರೇಷ್ಮೆಯ ಕವಚದಲ್ಲಿ ಇಟ್ಟಿರುತ್ತಾರೆ ; ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಯ್ಯಬೇಕಾದರೆ ಒಂದು ಪೀಠದ ಮೇಲೆ ಏರಿಸಿ ಶುಚಿಯಾದ ಜನ ಎತ್ತಿ ತರುತ್ತಾರೆ.

	ಇದರಲ್ಲಿ ಕೆಲವು ಗೀತಗಳು ಹಲವು ಸಲ ಬರುವುದುಂಟು. ರಾತ್ರಿ ಮಗ ಹುಟ್ಟಿದನೆಂದು ಸಂತೋಷಪಟ್ಟ ವ್ಯಾಪಾರಿಯೊಬ್ಬ ಬೆಳಗಾಗ ಆ ಮಗು ಸತ್ತಿತು ಎಂದು ಅಳುತ್ತಿದ್ದ ಎಂದು ಹೇಳಿ ಲೋಕದ ಸುಖವನ್ನು ನೆಚ್ಚಬೇಡ ಎಂದು ಎಚ್ಚರ ನುಡಿಯುವ ಗೀತ - ಸುಮಸುಮಾರು ಅದೇ ಮಾತುಗಳಲ್ಲಿ ನಾಲ್ಕು ಸಲ ಬಂದಿದೆ. ಈ ನಾಲ್ಕು ಪಾಠಗಳಲ್ಲಿ ಎರಡು ನಾನಕ್ ಗುರುವಿನವು. ಒಂದು ರಾಮದಾಸ ಗುರುವಿನದು, ಒಂದು ಗುರು ಅರ್ಜನದೇವನದು.

	ಗ್ರಂಥ್ ಸಾಹೆಬ್ ಸಿಕ್ಖ್ ಜನರ ಪೂಜೆಯ ವಸ್ತುವಾಗಿದೆ. ಅದರ ಪ್ರತಿಯನ್ನಿರಿಸಿ ದೇವರ ಪೂಜೆ ನಡೆಸಿ ಪ್ರಯಾಣಿಕರಿಗೆ ತಂಗಲು ಸ್ಥಳ ಒದಗಿಸಿ, ಮಕ್ಕಳಿಗೆ ಧರ್ಮಭೋಧೆ ಮಾಡುವ ಮಂದಿರಗಳು ಉಂಟು. ಇವನ್ನು ಈ ಮತದಲ್ಲಿ ಧರ್ಮಶಾಲೆ ಎಂದು ಕರೆಯುತ್ತಾರೆ.	(ನೋಡಿ- ಗುರುದ್ವಾರ)

	ಗುರು ಅಂಗದದೇವನಿಗೆ ಮೊದಲಲ್ಲಿ ಗ್ರಂಥ ನಾಗರೀಲಿಪಿಯಲ್ಲಿತ್ತು. ನಾನಕ್ ಗುರುವಿನ ನುಡಿ ಅದಕ್ಕೇ ಮಿಸಲಾದ ಒಂದು ಲಿಪಿಯಲ್ಲಿರುವುದು ಯೋಗ್ಯ ಎಂದು ಭಾವಿಸಿ ಅಂಗದದೇವ ಅದನ್ನು ಮಾರ್ಪಡಿಸಿ ಪಂಜಾಬೀ ವರ್ಣಮಾಲೆಯೊಂದನ್ನು ಮಾಡಿದ. ಗುರುಮುಖದಿಂದ ಬಂದ ಮಾತನ್ನು ಬರೆಯುವ ಲಿಪಿ ಎಂಬ ಕಾರಣದಿಂದ ಅದನ್ನು ಗುರುಮುಖಿ (ನೋಡಿ- ಗುರುಮುಖಿ) ಎಂದು ಕರೆದ. ಈ ವರ್ಣಮಾಲೆಯಲ್ಲಿ 35 ಅಕ್ಷರ ಇವೆ. ಕೆಲವು ಅಕ್ಷರ ನಾಗರಿ ಅಕ್ಷರದಂತೆಯೇ ಕಾಣುತ್ತವೆ. ಆದರೆ ಅವುಗಳ ಉಚ್ಚಾರ ಬೇರೆ. ಗುರುಮುಖಿಯ ಸ, ಮ, ವ, ಧ, ನಾಗರಿಯ ಮ, ಭ, ದ, ಪ.

	ಗ್ರಂಥ್ ಸಾಹೆಬ್ ಕೃತಿ ಸಂಗ್ರಹವನ್ನು ಈಗಿನ ರೂಪಕ್ಕೆ ತಂದವ ಗುರು ಅರ್ಜನದೇವ. ಗುರುದಾಸ್ ಎಂಬ ಶಿಷ್ಯನನ್ನು ಕರೆದು ಗೀತೆಗಳನ್ನೆಲ್ಲ ಹೇಳಿ ಅವನ್ನು ಅವನ ಕೈಯಿಂದ ಬರೆಯಿಸಿದ. ಹಿಂದಿನ ಕಾಲದ ಭಕ್ತರ ಗೀತಗಳನ್ನು ಸರಿಯಾಗಿ ಹೇಳಲು ಗುರು ಅರ್ಜನ್ ಹಿಂದೂ ಮುಸ್ಲಿಂ ಭಕ್ತಗಾಯಕರನ್ನು ಬರಮಾಡಿಕೊಂಡು ಗ್ರಂಥ್ ಸಾಹೆಬ್ ಸಂಗ್ರಹದಲ್ಲಿ ಸೇರಬಹುದಾದ ಗೀತಗಳನ್ನು ಕುರಿತು ಸಲಹೆ ಪಡೆದ. ಗ್ರಂಥ್ ಸಾಹೆಬ್‍ದಲ್ಲಿ ದೊರೆಯುವಂತೆ ಭಕ್ತರ ಈ ಗೀತಗಳಲ್ಲಿ ಕೆಲವೆಡೆ ಕೆಲವು ಪದಗಳು ಆಯಾ ಪ್ರಾಂತದಲ್ಲಿ ವಾಡಿಕೆಯಾಗಿರುವ ಪದಗಳಿಂದ ಬೇರೆಯಾಗಿವೆ. ಈ ಭೇದಕ್ಕೆ ಕಾರಣ ಆಗಿನ ದಿನದಲ್ಲಿ ಅವನ್ನು ಹಾಡಿದ ಆ ಭಕ್ತರು ಕೊಟ್ಟ ಪಾಠ ಹಾಗೆ ಇತ್ತು ಎನ್ನುವುದು. ಗುರು ಅರ್ಜನ್ ಮಾಡಿದ ಈ ಸಂಗ್ರಹ ಗ್ರಂಥ್ ಸಾಹೆಬ್ ಸಂಗ್ರಹದ ಮೊದಲ ರೂಪ. ಇದು 1604ರಲ್ಲಿ ಆಯಿತು. ಇದರ ಪರಿಷ್ಕøತ ಅಂತಿಮ ರೂಪ 1705ರಲ್ಲಿ ಗುರು ಗೋಬಿಂದ ಸಿಂಹನಿಂದ ಸಿದ್ಧವಾಯಿತು.

	ಗ್ರಂಥ್ ಸಾಹೆಬ್ ಇಂಥ ನಿಷ್ಕøಷ್ಟ ಗ್ರಂಥ. ಅದರ ಒಂದು ಅಕ್ಷರವನ್ನು ಬೇರೆ ಮಾಡುವುದಕ್ಕೆ ಯಾರಿಗೂ ಅಧಿಕಾರ ಇಲ್ಲ. ಜಹಾಂಗೀರ್ ಚಕ್ರವರ್ತಿ ಗುರು ಅರ್ಜನದೇವನನ್ನು ಕರೆದು, ತನಗೆ ರುಚಿಸದ ಕೆಲವು ಮಾತನ್ನು ಅದರಿಂದ ತೆಗೆದುಹಾಕು ಎಂದು ಅವನಿಗೆ ಆಜ್ಞೆ ಮಾಡಿದ. ಅದರ ಒಂದು ಅಕ್ಷರವನ್ನೂ ಬೇರೆ ಮಾಡಲು ತಾನು ಒಪ್ಪುವವನಲ್ಲ ಎಂದು ಗುರು ತಿಳಿಸಿ ತನ್ನ ನಿಷ್ಠೆಗಾಗಿ ಪ್ರಾಣವನ್ನೇ ಬಲಿಕೊಟ್ಟ. ಹರರಾಯ್ ಗುರುವಿನ ಹಿರಿಯಮಗ ರಾಮರಾಯ್ ತಂದೆಯ ಪ್ರತಿನಿಧಿಯಾಗಿ ಔರಂಜೇಬ್ ಚಕ್ರವರ್ತಿಯ ಬಳಿಗೆ ಹೋದಾಗ ಚಕ್ರವರ್ತಿ ಮುಸ್ಲಿಮರನ್ನು ಹಳಿಯುವ ಅರ್ಥದ ಒಂದು ಶ್ಲೋಕವನ್ನು ಗ್ರಂಥ್ ಸಾಹೆಬ್‍ದಿಂದ ಎತ್ತಿ ಅದರ ಅರ್ಥ ಏನು ಎಂದು ಕೇಳಿದನಂತೆ. ಶ್ಲೋಕ ಮುಸ್ಲಿಮರನ್ನು ಹಳಿಯುತ್ತದೆ ಎಂದು ಹೇಳಲು ಇಷ್ಟವಿಲ್ಲದೆ ರಾಮರಾಯ್, ಅದರಲ್ಲಿ ಒಂದು ಪದ ತಪ್ಪಿ ಬಿದ್ದಿದೆ, ಅದರ ಅರ್ಥ ಬೇರೆ ಎಂದನಂತೆ. ಈ ಮಾತು ಗುರು ಹರರಾಯ್ ಕಿವಿಗೆ ಮುಟ್ಟಿದಾಗ ಗುರು, `ನಾನಿನ್ನು ಈ ಮಗನ ಮುಖವನ್ನು ನೋಡುವುದಿಲ್ಲ. ಗ್ರಂಥ್ ಸಾಹೆಬ್ ವಿರೋಧ ಯಾವ ಆಕ್ಷೇಪಕ್ಕೂ ಸಮ್ಮತಿಸಬೇಡ ಎಂದು ಇವನಿಗೆ ಎಚ್ಚರ ಹೇಳಿದ್ದೆ. ಇವನು ನನ್ನ ಮಾತನ್ನೂ ಮೀರಿದ್ದಾನೆ - ಎಂದನಂತೆ.

	ಗುರು ಒಮ್ಮೆ ಹಾಸಿಗೆಯಲ್ಲಿ ಮಲಗಿದ್ದ ವೇಳೆ ಹೊರಗಿನಿಂದ ಕೆಲವು ಸಿಕ್ಖರು ಗ್ರಂಥದ ಗೀತಗಳನ್ನು ಹಾಡುತ್ತ ಬಂದರು. ದೇಹಸ್ಥಿತಿ ಸರಿಯಾಗಿಲ್ಲದಿದ್ದರೂ ಗುರು ಹಾಸಿಗೆಯಿಂದ ಎದ್ದನಂತೆ. ಏಕೆ ಈ ತೊಂದರೆ ತೆಗೆದುಕೊಂಡಿರಿ - ಎಂದು ಕೇಳಲು ಗುರುವಿನ ಮೂರ್ತಿ, ನಾನು ಅದಕ್ಕೆ ಮರ್ಯಾದೆ ತೋರದಿದ್ದರೆ ನನ್ನ ಶಿಷ್ಯರು ತೋರದೆ ಬಿಡುತ್ತಾರೆ ಎಂದನಂತೆ.

	ಗ್ರಂಥ್ ಸಾಹೆಬ್ ಜಪಜೀ ಎಂಬ ಧ್ಯಾನಪ್ರಾರ್ಥನೆಯಿಂದ ಆರಂಭವಾಗುತ್ತದೆ. ಇಕ್, ಓಂಕಾರ್, ಸತ್‍ನಾಂ, ಕರ್ತಾ, ಪುರುಖ್ - ಇವು ಮೊದಲ ಪದಗಳು. ಧ್ಯಾನಪ್ರಾರ್ಥನೆಯ ಈ ಮಾತುಗಳಿಂದ ಆರಂಭವಾಗುವ ವಾಕ್ಯಗಳ ಅರ್ಥ ಹೀಗಿದೆ : ದೇವರು ಇರುವುದು ಒಬ್ಬ. ನಿತ್ಯ ಸತ್ಯ ಎಂದು ಹೆಸರು. ಅವನು ಎಲ್ಲ ವಸ್ತುಗಳ ಸೃಷ್ಟಿಕರ್ತ. ಅವನು ನಿರ್ಭೀತ, ನಿದ್ರ್ವೇಷಿ. ಅವನ ಮೂರ್ತಿ ಕಲಾತೀತ. ಅವನು ಅಜ. ತನ್ನ ಆತ್ಮದ ಆತ್ಮ ಅವನೇ ; ಗುರುವಿನ ಅನುಗ್ರಹದಿಂದ ಮನುಜರಿಗೆ ಜ್ಞೇಯನಾಗುತ್ತಾನೆ. ಇದಾದ ಮೇಲೆ ಈ ಧ್ಯಾನದ ವಾಕ್ಯಗಳು ಬರುತ್ತವೆ; ಅವನು ಆರಂಭದಲ್ಲಿ ಸತ್ಯ ಸ್ವರೂಪ; ಹೀಗೆ ಇದ್ದು ಮನ್ವಂತರ ಹರಿದಂತೆ ಹಾಗೆಯೇ ಸತ್ಯಸ್ವರೂಪನಾಗಿ ಇದ್ದಿದ್ದಾನೆ. ಹಾಗೆಯೇ ಈಗಲೂ ಅವನು ಅಂತರ್ಯಾಮಿ ಸತ್ಯವಾಗಿದ್ದಾನೆ. ಹಾಗೆ ಅನಂತ ಕಲ್ಪಾಂತರಕ್ಕೂ ಶಾಶ್ವತ ಸತ್ಯ ಆಗಿ ಇರುತ್ತಾನೆ. 

	ಗ್ರಂಥ್ ಸಾಹೆಬ್ ಮಹಾಗ್ರಂಥದ ಸ್ವರೂಪ ಸ್ವಲ್ಪಮಟ್ಟಿಗೆ ತಿಳಿಯುವಂತೆ ಕೆಲವು ವಾಕ್ಯಗಳನ್ನು ಇಲ್ಲಿ ಹೇಳಬಹುದು ; ದೇವರನ್ನು ತಿಳಿಯುವುದಲ್ಲೆ ಯೋಚನೆ ಒಂದು ದಾರಿಯಲ್ಲ. ಹಾಗಾದರೆ ಅವನನ್ನು ತಿಳಿಯುವುದು ಹೇಗೆ ? ಅವನ ಇಚ್ಛೆಯಂತೆ ನಡೆ. ನಿನ್ನ ಇಚ್ಛೆಯನ್ನು ನಿನ್ನ ಹೃದಯದಲ್ಲಿ ಬರೆದಿರುವ ಅವನ ಇಚ್ಛೆಯಾಗಿ ಮಾಡು. ಅವನ ಸಂಕಲ್ಪದಿಂದ ಅವನು ಎಲ್ಲ ವಸ್ತುಗಳ ರೂಪವನ್ನೂ ನಿರ್ಮಿಸಿದ್ದಾನೆ. ಎಲ್ಲ ಜೀವನ ಆ ಆಜ್ಞೆಯಿಂದ ರೂಪು ತಳೆದಿದೆ. ಅವನ ಇಚ್ಛೆಯಿಂದ ಹೊರತು ವಸ್ತುಲೇಶ ಇಲ್ಲ. ಓ ನಾನಕ್ ! ಪರಮಪುರುಷನ ಸಂಕಲ್ಪ ಇರುವುದನ್ನು ಅನುಭವಿಸಿದವನು ಎಂದಾಗಲಿ ಅಹಂ ಭಾವದಿಂದ ನಾನು ಎಂಬ ಹೆಮ್ಮೆಯ ಮಾತನ್ನು ಉಸುರನು. ಓ ನಾನಕ್ ! ನಾವು ಇಷ್ಟನ್ನು ತಿಳಿದರೆ ಸಾಕು : ಸತ್ಯಸ್ವರೂಪನಾದ ದೈವ ಎಲ್ಲರ ಪಾಲಿನ ಏಕೈಕ ಜ್ಯೋತಿ. ಅವನನ್ನು ಒಂದು ವಿಗ್ರಹವಾಗಿ ಪ್ರತಿಷ್ಠೆ ಮಾಡುವುದು ಸಾಧ್ಯವಲ್ಲ. ಅಷ್ಟೇ ದಿಟ, ಮಾನವ ಅವನ ಆಕಾರವನ್ನು ರೂಪಿಸಲಾರ. ಆತನ ನಾಮವನ್ನಾಲಿಸಿದರೆ ಪಾಪ, ದುಃಖ ನಾಶವಾಗುತ್ತದೆ. ಹೆಸರನ್ನು ದೃಢವಾಗಿ ನಂಬಿದವರ ದಾರಿಯನ್ನು ತಡೆಯಬಲ್ಲದು ಇಲ್ಲ, ಕೆಡಿಸಬಲ್ಲದು ಇಲ್ಲ. ಆತನ ಸೌಂದರ್ಯವನ್ನು ಆತನ ಸೃಷ್ಟಿಯ ಶಕ್ತಿಯನ್ನು ಬಣ್ಣಿಸಲು ಹೇಗೆ ಸಾಧ್ಯ ? `ನಿನ್ನ ಔದಾರ್ಯವನ್ನು ಅಳೆಯುವ ಶಕ್ತಿ ಯಾರಿಗುಂಟು ಓ ಪ್ರಭೂ ! ನನ್ನಂಥ ಒಂದು ಅಲ್ಪ ಜಂತು ನಿನ್ನ ಸೃಷ್ಟಿಯ ವಿಸ್ತಾರವನ್ನೂ ಆಶ್ಚರ್ಯವನ್ನು ಹೇಗೆ ಬಣ್ಣಿಸÀಬಹುದು ? ನಿನ್ನ ನಾಮಗಳು ಅಸಂಖ್ಯ. ನಿನ್ನ ನಿವಾಸಗಳು ಅಸಂಖ್ಯ. ಅನಂತ ಕೋಟಿ ಲೆಕ್ಕದ ನಿನ್ನ ಪ್ರಪಂಚಗಳು ಊಹೆ ಮುಟ್ಟಬಲ್ಲ ಮೇರೆಯನ್ನು ಮೀರಿವೆ; ಅವುಗಳ ಸಂಖ್ಯೆಯನ್ನು ಅನಂತಕೋಟಿಯೆಂದು ಎಣಿಕೆಗೆ ಗುರಿಮಾಡುವುದು ತಪ್ಪು. ಕ್ಷೇತ್ರ ಯಾತ್ರೆ, ತಪಸ್ಸು, ದಯೆ, ದಾನ ಮೊದಲಾದವು ಸ್ವಲ್ಪ ಪುಣ್ಯವನ್ನು ತರುತ್ತವೆ, ಸಾಸಿವೆ ಕಾಳಿನ ಗಾತ್ರದಷ್ಟು. ಆದರೆ ನಾಮವನ್ನು ಕೇಳಿ ನಂಬಿ ಭಜಿಸುವ ಮನುಷ್ಯ ತನ್ನಲ್ಲಿರುವ ಒಂದು ಕ್ಷೇತ್ರದ ತೀರ್ಥದಲ್ಲಿ ಸ್ನಾನ ಮಾಡುತ್ತಾನೆ. ಯಾವ ಕಾಲದಲ್ಲಿ ಯಾವ ಕಲ್ಪದಲ್ಲಿ, ತಿಂಗಳ ಅಥವಾ ವಾರದ ಯಾವ ದಿವಸ, ಯಾವ ಋತುವಿನಲ್ಲಿ ಯಾವ ಮಾಸದಲ್ಲಿ, ನೀನು ಯಾವಾಗ ಲೋಕವನ್ನು ಸೃಷ್ಟಿಸಿದೆ ? ಲೋಕವನ್ನು ಸೃಷ್ಟಿಸಿದ ದೇವರೊಬ್ಬ ಬಲ್ಲ, ತಾನು ಅದನ್ನು ಎಂದು ಸೃಷ್ಟಿಸಿದೆ ಎನ್ನುವುದನ್ನು. ನಿನ್ನನ್ನು ಸ್ತುತಿಸಿದವರು ನೀನು ಎಷ್ಟು ಹಿರಿಯ ಎನ್ನುವುದನ್ನು ಕಾಣದೇ ಇದ್ದಾರೆ. ನದೀನದಗಳು ಇಳಕ್ಕೆ ಹರಿಯುತ್ತವೆಯಾದರೂ ಅದರ ವಿಸ್ತಾರವನ್ನು ಕಾಣವು.

	ಇರುವುದಕ್ಕಾಗಲಿ ಸಾಯುವುದಕ್ಕಾಗಲಿ ನಿನಗೆ ಶಕ್ತಿಯಿಲ್ಲ. ಧನವನ್ನು ಪದವಿಯನ್ನು ಗಳಿಸಿ ಹೆಮ್ಮೆ ಪಡಲು ನಿನ್ನ ಅಳವಲ್ಲ. ಮನಸ್ಸನ್ನು ಯೋಚಿಸುವಂತೆ ವಿಚಾರಿಸುವಂತೆ ಬಲಾತ್ಕರಿಸಲು ನಿನಗೆ ಶಕ್ತಿಯಿಲ್ಲ. ಯಾರಿಗೆ ಶಕ್ತಿಯಿದೆ ಅವನು ನಿರ್ಮಿಸುತ್ತಿದ್ದಾನೆ ನೋಡಿಕೊಳ್ಳುತ್ತಾನೆ.

	ನಾನಕ್ ! ಕರುಣಾಳು ನಮ್ಮ ಪ್ರಭು ಒಂದು ನೋಟದಿಂದ ನಮ್ಮನ್ನು ಸುಖಿಗಳನ್ನಾಗಿ ಮಾಡುತ್ತಾನೆ. ನೀರು ನಮ್ಮ ತಂದೆ, ನೆಲ ನಮ್ಮ ತಾಯಿ, ಹಗಲು ಇರುಳು ನಮ್ಮನ್ನು ಸಾಕುವ ದಾದಿಯರು. ನಿನ್ನನ್ನು ವರ್ಣಿಸಲು ಯತ್ನ ಮಾಡುವರು ನಿನ್ನ ಆಳದಲ್ಲಿ ದಾರಿಗೆಡುತ್ತಾರೆ. ಓ ನನ್ನ ಜೀವವೇ ! ನೀನೇಕೆ ಹೀಗೆ ಒದ್ದಾಡಿ ಕಳವಳಪಡುತ್ತೀಯೇ ? ದೇವರು ನೋಡಿಕೊಳ್ಳುತ್ತಾನೆ ಎಂದು ನೀ ಕಾಣೆಯಾ ? ಕಲ್ಲಿನಲ್ಲಿ ಬಂಡೆಯಲ್ಲಿ ಅವನು ಜೀವ ಜಂತುಗಳನ್ನು ನಿಲ್ಲಿಸಿದ್ದಾನೆ. ಅವುಗಳೆದುರಿಗೆ ಅವುಗಳ ಆಹಾರವನ್ನು ಇಡುತ್ತಾನೆ. ಪ್ರಭೂ ! ಓ ಸ್ರಷ್ಟಾರ ! ಓ ಸತ್ಯ! ನಿನ್ನ ಮನ ಎಂತು, ಅಂತು ನಡೆಯುತ್ತದೆ. ನೀನು ನೀಡಿದ್ದನ್ನು ನಾನು ಪಡೆಯುತ್ತೇನೆ. ಇರುವುದು ಏನೋ ಅದೆಲ್ಲ ನಿನ್ನದು. ಜೀವರಾಶಿ ಎಲ್ಲಾ ನೀನು ಆಡುತ್ತಿರುವ ಆಟ. ನೀನು ಬೇರೆಯಾಗಿ ನಿಂತೆ. ಒಬ್ಬ ತಾನೂ ಬೇರೆಯಾದ. ನೀನು ಸೇರಿ ಬಂದೆ, ಒಬ್ಬ ನಿನ್ನಲ್ಲಿ ಬೆರೆತ. ಗಗನ ನಿನ್ನ ತಾಂಬಾಳ ; ಸೂರ್ಯ ಚಂದ್ರ ನಿನ್ನ ಹಣತೆಗಳು. ನಕ್ಷತ್ರಗಳ ಮಹಾಮಾಲೆ ಚೆಲ್ಲಿದ ಮುತ್ತಿನಂತಿದೆ ; ಚಂದ್ರನ ವನಗಳು ನಿನಗೆ ಧೂಪ ; ಮಾರುತಗಳು ನಿನ್ನ ರಾಜವೀಜನವನ್ನು ಬೀಸುತ್ತಿವೆ ; ಕಾನನಗಳ ಪುಷ್ಪರಾಜಿ ನಿನ್ನ ಪದದೆಡೆ ಅರ್ಪಿತವಾಗಿ ಬಿದ್ದಿದೆ ; ಓ ಭಯನಾಶಕ ! ಇದು ಎಂಥ ಅದ್ಭುತ ದೀಪೋತ್ಸವ ; ಪ್ರಭು ಬಳಿಯಲ್ಲಿದ್ದಾನೆ ಪ್ರಭು ದೂರವಾಗಿದ್ದಾನೆ, ಇದರ ಅದರ ಅಂತರದಲ್ಲಿ ಇದ್ದಾನೆ ಪ್ರಭು. ಕೇಳು ನನ್ನ ಹೃದಯವೇ ; ನೀನು ನೀರನ್ನು ಪ್ರೀತಿಸುವಂತೆ ನೀನು ದೇವರನ್ನು ನಿರಂತರ ಪ್ರೀತಿಸು. ನಾನಕ್, ದೇವರು ಏಕೈಕ ಮಾರ್ಗ ; ದೇವರು ಏಕೈಕ ಲಕ್ಷ್ಯ. ಅವನನ್ನು ಬಿಟ್ಟು ಬೇರೆ ಶರಣಿಲ್ಲ. ಉತ್ತಮ ಜನ್ಮ, ಪ್ರಚಂಡ ಕೀರ್ತಿ, ಮಣ್ಣು ಹುಡಿಯಂತೆ ತೀರ ವ್ಯರ್ಥ. ದೇವರು ಯಾರನ್ನು ಉದ್ಧಾರ ಮಾಡುತ್ತಾನೋ ; ಅವನೀಗ ಉದ್ಧಾರವಾದ. ಒಳ್ಳೆಯ ಊಟ ಚೆನ್ನಾದ ಬಟ್ಟೆ ಇಷ್ಟರಿಂದ ಬಂದ ಫಲವೇನು, ನಮ್ಮ ಒಳಗೆ ಸತ್ಯ ಇಲ್ಲವಾದರೆ ? ಮಾನವನ ದೇವನ ಮಧ್ಯೆ ಸಂಬಂಧವನ್ನು ನಿರ್ಮಿಸುವುದಕ್ಕೆ ದಾರಿ ಎಂದರೆ ದೇವರನ್ನು ಸ್ತುತಿಸುವುದು. ಲೋಕದ ಅತಿಶ್ರೇಷ್ಠ ಚೇತನರು ಕಂಡು ಮರೆಯುವ ಕ್ಷಣ ಮಾತ್ರದ ಜೀವಗಳು. ನೀನೊಬ್ಬ ಇದೀಯೆ, ನೀನೊಬ್ಬ ಇದೀಯೆ.

	ಬಹು ಪಾಲು ಜನ ಆಯುಷ್ಯವನ್ನು ಕೊಂಚ ಕೊಂಚವಾಗಿ ವ್ಯರ್ಥ ಮಾಡುತ್ತಾರೆ. ಬಾ ಎಂದು ಕರೆಯದೆ ಬರುತ್ತದೆಂದು ನೆನೆಯದೆ, ಸಾವು ಬಂದಾಗ, ನಾನಕ್, ಈ ಹಾಳು ಕಳವಿನ ತಪ್ಪಿಗೆ ಯಾರು ಹೊಣೆ ? ಜೀವದ ಮೂಗುದಾರ ನಮ್ಮ ಒಡೆಯನ ಕೈಯಲ್ಲಿದೆ, ಮೆಯ್ಗಳ ಕೂಟ ಎಷ್ಟೇ ನಿಕಟವಾಗಲಿ ಕೂಟವಲ್ಲ. ಚೇತನ ಚೇತನ ಯಾವಾಗ ಕೂಡುತ್ತವೆ ಆಗ ನಾವು ದಿಟವಾದ ಕೂಟದ ಮಾತಾಡಬಹುದು. ನಿಸರ್ಗ ಹೊರಗಿನ ದೃಷ್ಟಿ ಇಲ್ಲದಂತೆ ಮಾಡಿದವರನ್ನು ಕುರುಡು ಎಂದು ಕರೆಯಲೇಕೆ ? ದೇವರ ಸಂಕಲ್ಪವನ್ನು ಅರಿಯದವನು ಯಾರು, ಅವನೀಗ, ನಾನಕ್ ದಿಟವಾಗಿ ಕುರುಡ. ದಿಟವಾಗಿ ಗುರು ಆದವನು ತನ್ನ ಶಿಷ್ಯರನ್ನು ನೋಡಲು ಬಯಸುತ್ತಾನೆ. ನಾನು ಯಾರ ಪಕ್ಷಕ್ಕೆ ಸೇರಿದವನು ? ಇಹದಲ್ಲಿ ಪರದಲ್ಲಿ ನನ್ನನ್ನು ನೋಡಿಕೊಳ್ಳಬಲ್ಲ ದೇವರ ಪಕ್ಷಕ್ಕೆ. ಪ್ರಭು! ನೀನೆ ಗುರು. ನೀನು ಅವನ ಶಿಷ್ಯ. ಗುರುವನ್ನು ಆರಾಧಿಸುವಂದು ನಾನು ದಿಟವಾಗಿ ನಿನ್ನನ್ನು ಪೂಜಿಸುತ್ತೇನೆ.

	ಪ್ರಭು ! ನಿನ್ನ ಸೇವಕ ನಾನಕನಿಗೆ ಈ ಒಂದು ಹಂಬಲ ! ನೀನು ಸಲ್ಲಿಸು ; ನನಗೆ ನಿನ್ನ ದರ್ಶನ ನೀಡು. ಈ ಒಡಲಿಗೆ, ಆತ್ಮಕ್ಕೆ ಶಾಂತಿಯನ್ನು ಅನುಗ್ರಹಿಸು. ಎಲ್ಲ ಧರ್ಮಗಳಲ್ಲಿ ಉತ್ಕøಷ್ಟ ಧರ್ಮ ಇದು. ಭಗವನ್ನಾಮವನ್ನು ಭಕ್ತಿಯಿಂದ ಉಚ್ಛರಿಸುವುದು ; ಒಳ್ಳೆಯದನ್ನು ಮಡುವುದನ್ನು ಮಂದಿರಗಳೆಲ್ಲ ಉತ್ಕøಷ್ಟ ಮಂದಿರ, ನಾನಕ್, ದೇವರು ಆವಾಸಮಾಡಿಕೊಂಡಿರುವ ಮಾನವ ಹೃದಯ. ದೇವನನ್ನು ಬಲ್ಲವನನ್ನು ದೇವರನ್ನು ಹೊರತು ಬೇರೆ ಒಂದನ್ನು ನೆನೆಯುವುದಿಲ್ಲ. ನೀನು ನನ್ನ ತಂದೆ, ನೀನು ನನ್ನ ತಾಯಿ, ನೀನು ನನ್ನ ಒಡಹುಟ್ಟು, ನೀನು ನನ್ನ ನಂಟು. ಎಲ್ಲ ಎಡೆಯಲ್ಲಿಯೂ ನೀನು ರಕ್ಷಕ. ನಾನು ಅಂಜಲಿಏಕೆ ? ಚಿಂತಿಸಲಿ ಏಕೆ. ನನ್ನ ಆಸೆಗಳು ಪೂರ್ಣವಾದವು. ನನ್ನ ಶಾಂತಿ ಹಿಡಿದಿದೆ. ಪ್ರಿಯನ ಕಥೆ ಇನಿದಾಗಿದೆ. ಕಳೆದು ಹೋಗಿದೆ, ನನ್ನ ರತ್ನ, ಅವನನ್ನು ನಾನು ಮರಳಿ ಪಡೆದೆ. ಮನುಷ್ಯ ದೇವರನ್ನು ತನ್ನ ಕೋಟೆಯಾಗಿ ಮಾಡಿಕೊಳ್ಳಲಿ ಆಮೇಲೆ ಅವನ ಕರ್ಮ ಸತ್ಕರ್ಮ ಆಗುತ್ತದೆ. ಮೊದಲು ಸಾಯಲು ಒಪ್ಪು. ಬದುಕುವ ಆಸೆಯನ್ನು ತೊರೆ. ಎಲ್ಲರ ಅಡಿಯ ಧೂಳಾಗು. ಆಮೇಲೆ ನನ್ನತ್ತ ಬಾ ! ದುಃಖದಿಂದ ಭೂಗತನಾಗದೆ ಸುಖದಲ್ಲಿ ಪ್ರಹೃಷ್ಟನಾಗದೆ ಅಹಂಕಾರ, ಲೋಭ, ಪ್ರಕಾಮಗಳ ಶಕ್ತಿಯಿಂದ ದೂರ ಇರುವಂಥ ಮನುಷ್ಯ ದೇವರ ಪ್ರತೀಕ ಎಂದು ನಾನಕ್ ಹೇಳುತ್ತಾನೆ. ದೈವ ಪ್ರೇಮದ ಒಂದಾದರೂ ಕಿಡಿ ಎಂದೂ ಹೊತ್ತದ ಹೃದಯದ ಮನುಷ್ಯ ದೇಹ ಒಂದು ಹಂದಿಯ, ಒಂದು ನಾಯಿ, ದೇಹಕ್ಕಿಂತ ಹೆಚ್ಚಿನದಲ್ಲ. ಚೈತ್ರಾನಿಲ ಭಯದಲ್ಲಿ ಸುಳಿದಾಡುತ್ತದೆ. ನೂರು ಸಾವಿರ ನದಿಗಳು ಭಯದಲ್ಲಿ ಹರಿಯುತ್ತವೆ. ಸೂರ್ಯ ಭಯದಲ್ಲಿ ನಡೆಯುತ್ತಾನೆ. ಚಂದ್ರ ಭಯದಲ್ಲಿ ನಡೆಯುತ್ತಾನೆ. ದೇವರು ಎಲ್ಲರಿಗೂ ಭಯವನ್ನು ವಿಧಿಸಿದ್ದಾನೆ. ಭಯ ಇಲ್ಲದೆ ಇರುವುದು, ನಾನಕ್ ನೀರಾಕಾರನಾದ ಸತ್ಯ ಸ್ವರೂಪ ಅವನೊಬ್ಬನಿಗೆ. ನನಗೆ ಈ ನೋವನ್ನು ಕೊಟ್ಟ ನನ್ನ ಸೃಷ್ಟಿಕರ್ತ ಇದರ ನಿವಾರಣೆಯನ್ನು ಮಾಡುತ್ತಾನೆ. ದೇವರ ಹೆಸರು ಹೇಳಿದೆ, ನಾನು ಬಾಳಿದೆ. ನಾನು ಅದನ್ನು ಮರೆತೆ ಸತ್ತೆ. ನಿನ್ನ ಹೃದಯದಲ್ಲಿ ದೇವರ ಭಯಕ್ಕೆ ಎಡೆ ಕೊಡು. ಸಾವಿನ ಭಯ ಆಗ ಭಯಪಟ್ಟು ಅಲ್ಲಿಂದ ತೊಲಗುತ್ತದೆ. 

	ಗ್ರಂಥ್ ಸಾಹೆಬ್ ಲೋಕದ ಅತ್ಯುತ್ತಮ ಧರ್ಮಗ್ರಂಥಗಳಲ್ಲಿ ಒಂದಾದ ಉನ್ನತ ಕೃತಿ. ದೈವಭಕ್ತಿಯ ಪರಾಕಾಷ್ಠೆಯನ್ನು ಸಹಜ ಸುಂದರ ಶಬ್ದಗಳಲ್ಲಿ ಪ್ರಕಟಿಸಿರುವ ಇದರ ಗೀತಗಳು ಎಷ್ಟು ಶ್ರೇಷ್ಠ ಧಾರ್ಮಿಕ ಕೃತಿಗಳೋ ಅಷ್ಟೇ ಶ್ರೇಷ್ಠ ಸಾಹಿತ್ಯ ಕೃತಿಗಳೂ ಹೌದು. ಇದರ ಕೆಲವು ಮಾತು ವೇದ ಉಪನಿಷತ್ತುಗಳ ಛಾಯೆ ಆಗಿವೆ ; ಇನ್ನು ಕೆಲವು ಸುಂದರ ಸರಳ ಚೇತನಗಳ ಸರಳ ಸುಂದರ ಪ್ರಕಾಶನ ಆಗಿವೆ. ಸರಳ ಸುಂದರ ಆಗಿರುವುದರಿಂದ ಅವುಗಳಲ್ಲಿ ಉನ್ನತ ಕಾವ್ಯದ ರಸ ಕಾಣುತ್ತದೆ. ಇದಕ್ಕೆ ನಿದರ್ಶನವಾಗಿ ಇಲ್ಲಿ ಈ ಗೀತವನ್ನು ಕೊಡಬಹುದು :

	ಅಶ್ರುತಗಾನ ನಿನ್ನ ಮಂದಿರದ ದುಂದುಭಿ ಧ್ವಾನ.
	ನಿನ್ನ ಕಣ್ಣು ಸಾವಿರ ; ಎಂದೂ ನಿನಗೆ ಕಣ್ಣಿಲ್ಲ.
	ನಿನ್ನ ಆಕಾರ ಸಾವಿರ ; ಎಂದೂ ನಿನಗೆ ಆಕಾರ ಇಲ್ಲ.
	ನಿನ್ನ ಪಾವನಾಂಘ್ರಿ ಸಾವಿರ ಇದ್ದೂ ನಿನಗೆ
	ಒಂದಾದರೂ ಪಾದ ಇಲ್ಲ.
	ನಿನ್ನ ಘ್ರಾಣ ಸಾವಿರ ; ಹೀಗಿದ್ದೂ 
	ನಿನಗೆ ಘ್ರಾಣ ಇಲ್ಲ.
	ಇದೆಲ್ಲ ನಿನ್ನ ಲೀಲೆ ; ಇದರಿಂದ 
	ನಾನು ಮರುಳಾಗಿದ್ದೇನೆ.
	ಒಂದೊಂದಿ ಹೃದಯದಲ್ಲೂ ಜ್ಯೋತಿ ಇದೆ ;
	ಆ ಜ್ಯೋತಿ ನೀನು.
	ದೇವರಿಂದಲೆ ಬಂದ ಆ ಬೆಳಕಿನಿಂದ
	ಒಂದೊಂದು ಹೃದಯವೂ ಬೆಳಗುತ್ತಿದೆ.
	ಇದ್ದೂ ಈ ದಿವ್ಯಜ್ಯೋತಿ ಗುರುವಿನ ಉಪದೇಶ
	ದೊರೆತ ಮೇಲೆಯೆ ಆವಿಷ್ಕøತವಾಗುತ್ತದೆ.
	ಓ ಪ್ರಭು ; ದುಂಬಿ ಹೂವಿನ ರಸಕ್ಕೆ ಹಂಬಲಿಸುವಂತೆ
	ನನ್ನ ಮನಸ್ಸು ನಿನ್ನ ಪದಕಮಲಗಳನ್ನು ಬಯಸುತ್ತಿದೆ.
	ಹಗಲೇನು ಇರುಳೇನು ನನಗೆ ನಿನ್ನನ್ನು ಬಯಸಿ ಆಸರು.
	ನಾನಕನಿಗೆ ನಿನ್ನ ಕರುಣೆಯ ಜಲವನ್ನು ನೀಡು.
	ಅವನು ಸಾರಂಗದಂತೆ, ಮೇಘದಂತೆ ಬೀಳುತ್ತಿರುವ
	ಹನಿಯನ್ನು ಕುಡಿಯುವ ಚಾತಕದಂತೆ, ಆಗಿದ್ದಾನೆ.
	ಅವನು ಸದಾ ನಿನ್ನ ಹೆಸರ ಶಾಂತಿಯಲ್ಲಿ ನೆಲಸುವಂತೆ ಮಾಡು.
	(ನೋಡಿ- ನಾನಕ್)									(ಎಂ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ